ನೀವುವಿಕೆ -
ನಾದುವಂತೆ ಮೈಯನ್ನು ಹಿಸುಕಿ ತಿಕ್ಕುವ ಒಂದು ಚಿಕಿತ್ಸಾ ಕ್ರಮ; ಪರ್ಯಾಯನಾಮಗಳು ಅಂಗಮರ್ಧನ, ಸಂವಾಹಕ್ರಿಯೆ, ಮಾಲೀಸ್ (ಮ್ಯಾಸ್ಸೇಜ್). ಇದು ಬಹಳ ಹಿಂದಿನಿಂದಲೂ ರೂಢಿಯಲ್ಲಿರುವ ಕ್ರಮ. ಅಲ್ಪ ಸ್ವಲ್ಪ ಹೆಚ್ಚಾಗಿ ನೋವಾದಾಗ ಹಾಗೂ ಶ್ರಮ ಕಾರ್ಯಗಳಿಂದ ಮೈಕೈನೋವು ಬಂದಾಗ ಆ ಭಾಗಗಳನ್ನು ಮೃದುವಾಗಿ ಹಿತವೆನಿಸುವಂತೆ ಸವರಿಕೊಳ್ಳುವುದೂ ಪ್ರಾಣಿಗಳು ನಾಲಗೆಯಿಂದ ನೆಕ್ಕಿ ನೆಕ್ಕಿ ಸಮಾಧಾನಪಟ್ಟುಕೊಳ್ಳುವುದೂ ಸರ್ವವಿದಿತ. ಭರತಖಂಡದ ಆಯುರ್ವೇದ ಚಿಕಿತ್ಸಾ ಕ್ರಮದಲ್ಲಿ ಸಂವಾಹಕ್ರಿಯೆ ಒಂದು ವಿಶಿಷ್ಟ ಸಂಪ್ರದಾಯವೇ ಆಗಿದೆ. ದಿನನಿತ್ಯ ಸ್ನಾನಮಾಡುವಾಗ ವಿಶೇಷವಾಗಿ, ಅಭ್ಯಂಗ ಮಾಡುವಾಗ ಸಂವಾಹಕ್ರಿಯೆ ಜರಗಿಸಲು ನಿಯಮಗಳಿವೆ. ಅಂಗ ಸೌಷ್ಠವಕ್ಕೆ ಹೆಸರಾದ ಪ್ರಾಚೀನ ಗ್ರೀಕ್ ಯುವಕರು ಅಂಗಮರ್ದನಕ್ಕೆ ವಿಶೇಷ ಲಕ್ಷ್ಯವೀಯುತ್ತಿದ್ದರು. ರೋಮಿನಲ್ಲಿ ಗ್ಲೇಡಿಯೇಟರುಗಳೆಂಬ ಕ್ರೀಡಾಮಲ್ಲರು ತಮ್ಮ ದೇಹವನ್ನು ಮಲ್ಲತನಕ್ಕೆ ಒಡ್ಡುವುದಕ್ಕೆ ಮುನ್ನ ಮತ್ತು ಒಡ್ಡಿದ ಬಳಿಕ ಅಂಗಮರ್ದನ ಮಾಡಿಕೊಳ್ಳುತ್ತಿದ್ದರು. ಅಂಗಮರ್ದನದ ಪ್ರಯೋಜನವನ್ನು ಗ್ರೀಕ್ ಮತ್ತು ರೋಮನ್ ತರುಣರು ಮಾತ್ರ ಬಯಸುತ್ತಿರಲಿಲ್ಲ. ಸ್ತ್ರೀಯರು ಕೂಡ ಅಂಗಮರ್ದನ ಕ್ರಮಕ್ಕೆ ಒಳಗಾಗುತ್ತಿದ್ದರೆಂಬುದು ತಿಳಿದಿದೆ. ಸುಮಾರು 18ನೆಯ ಶತಮಾನದಲ್ಲಿ ಅಂಗಮರ್ದನ ಕ್ರಮ ಫ್ರಾನ್ಸ್, ಸ್ವಿಟ್ಜರ್ಲೆಂಡ್, ಸ್ವೀಡನ್ ಮುಂತಾದ ಇತರ ಯೂರೋಪಿಯನ್ ಪ್ರದೇಶಗಳಿಗೆ ಹರಡಿತು. ಆದರೆ ಅಜ್ಞಾನದಿಂದ ಕ್ರಮಗೆಟ್ಟ ಅಂಗಮರ್ದನ ವಿಧಾನಗಳು ಅನುಸರಿಸಲ್ಪಟ್ಟು ಅನೇಕ ವೇಳೆ ಅನುಕೂಲದ ಬದಲು ಪ್ರತಿಕೂಲವೇ ಆಗುತ್ತಿತ್ತು. ಈಚೆಗೆ ಅಂದರೆ ಸುಮಾರು 1915-20ರಿಂದ ನೀವುವಿಕೆ ಶಾಸ್ತ್ರೀಯವಾದ ಒಂದು ಕಲೆ ಆಗಿ ಬೆಳೆಯುತ್ತ ಬಂದಿದೆ. ಹದವರಿತ ಒತ್ತುವಿಕೆಯಿಂದ ರಕ್ತ ನಾಳಗಳಲ್ಲಿ ಮತ್ತು ದುಗ್ಧರಸನಾಳಗಳಲ್ಲಿ ದ್ರವದ ಹಂಚಿಕೆ ಪರಿಚಲನೆಗಳನ್ನು ಕ್ರಮಗೊಳಸಿಬಹುದು. ನೀವುವ ಚಿಕಿತ್ಸೆಯಿಂದ ದೊರೆಯುವ ಪ್ರಮುಖ ಲಾಭ ಇದೇ. ಅಂಗಮರ್ದನದಿಂದ ಇಂಥ ಲಾಭವನ್ನು ನಿಸರ್ಗ ನಿರಂತರವಾಗಿ ಪಡೆಯುತ್ತಲೇ ಇದೆ ಎಂದರೆ ಆಶ್ಚರ್ಯವಾಗಿ ಕಾಣಬಹುದು. ಕೈಕಾಲುಗಳ ಸ್ವಾಭಾವಿಕ ಚ¯ನೆಗಳಲ್ಲಿ ಉಂಟಾಗುವ ಸ್ನಾಯು ಸಂಕೋಚನ ವ್ಯಾಕೋಚನಗಳಿಂದ ಧಮನಿಗಳೂ ನೀವಲ್ಪಟ್ಟಂತಾಗಿ ಅಭಿಧಮನಿಗಳಿಂದ ರಕ್ತ ಗುಂಡಿಗೆಗೆ ವಾಪಸಾಗಲು ಅನುಕೂಲವಾಗಿದೆ.

	ಅಂಗಮರ್ದನವನ್ನು ಸಾಧಾರಣವಾಗಿ ಅಂಗಸಾಧನೆಗೆ ಹೋಲಿಸಬಹುದಾದರೂ ದೇಹದ ಮೇಲಿನ ಪರಿಣಾಮಗಳಲ್ಲಿ ಅದು ಬೇರೆಯಾಗಿಯೇ ಇದೆ. ಅಂಗಸಾಧನೆಯಿಂದ ಮಾಂಸ ಖಂಡಗಳಲ್ಲಿ ಬಹಳವಾಗಿ ಆಮ್ಲ ಉತ್ಪತ್ತಿ ಆಗಿ ಅಲ್ಲೆ ಶೇಖರಿಸಿದಂತಾಗುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅಂಗಮರ್ದನದಿಂದ ಆಮ್ಲ ಹೆಚ್ಚಾಗಿರುವಲ್ಲಿಂದ ಉಚ್ಚಾಟನೆ ಆಗುತ್ತದೆ. ಅಂಗಮರ್ದನದಿಂದ ದೊರೆಯುವ ಈ ಪ್ರಯೋಜನವನ್ನು ಪಡೆಯುವವರಲ್ಲಿ ಜಟ್ಟಿಗಳನ್ನೂ ಕುದುರೆಗಳನ್ನೂ ಪ್ರಮುಖವಾಗಿ ಗಣಿಸಬಹುದು.

	ಮೈ ತಿಕ್ಕುವುದಕ್ಕೆ ಮುಂಚೆ ಕಾವು ಕೊಟ್ಟು ಅಂಗಅಂಗಾಂಶಗಳಲ್ಲಿ ರಕ್ತ ಹೆಚ್ಚಾಗಿ ಹರಿಯುವಂತೆ ಮಾಡುತ್ತಾರೆ. ಆದರೆ ಇದನ್ನು ಹದವರಿತು ಮಾಡಬೇಕು ಮಿತಿಮೀರಿದರೆ ಅದರಿಂದ ಉಸಿರಾಟ ವೇಗಯುತವಾಗಿ ತನ್ಮೂಲಕ ದೇಹದ ಇಂಗಾಲ ಡೈಆಕ್ಸೈಡ್ ಪರಿಮಾಣ ಕಡಿಮೆ ಆಗಿ ಕ್ಷಾರಾಂಶ ಹೆಚ್ಚುತ್ತದೆ. ಹೀಗಾಗದಂತೆ ನೋಡಿಕೊಳ್ಳುವುದು ಮುಖ್ಯ.

	ಅಂಗಮರ್ದನದಿಂದ ರಕ್ತನಾಳಗಳು ವ್ಯಾಕೋಚಿಸುವುದರ ಜೊತೆಗೆ ರಕ್ತಕಟ್ಟಿರುವ ಅಥವಾ ಶೇಖರಿಸಿದಂತಾಗಿರುವ ದೇಹದ ಇತರ ಕಡೆಗಳಿಗೆ ರಕ್ತ ಸುಗಮವಾಗಿ ಪ್ರವಹಿಸಲು ಅನುಕೂಲ ಆಗುತ್ತದೆ. ಅಂಗಮರ್ದದಿಂದ ಲಾಭ ಈ ರೀತಿ ದೊರೆಯುವುದೆಂಬುದನ್ನು ಪ್ರಯೋಗಿಕವಾಗಿ ಮೊಲದ ಕಿವಿಯನ್ನು ನೀವಿ ಅಲ್ಲಿಯ ಧಮನಿಗಳನ್ನು ಸೂಕ್ಷ್ಮದರ್ಶಕದಿಂದ ಪರೀಕ್ಷಿಸಿ ವಿಶದಪಡಿಸಲಾಗಿದೆ. ಕಿವಿಯನ್ನು ನೀವಿದ ತರುವಾಯ ಕಿವಿಯ ಲೋಮನಾಳಗಳಲ್ಲಿ ವರ್ಣರಹಿತ (ಕಲರ್‍ಲೆಸ್) ರುಧಿರ ಕಣಗಳು ಅವುಗಳ ಭಿತ್ತಿಗೆ ಅಂಟಿಕೊಂಡು ಅನಂತರ ತೂರಿ ಹೊರಬರುವುದನ್ನೂ ತೋರಿಸಲಾಗಿದೆ. ಇದರಿಂದ ಆ ನೆರೆಯಲ್ಲೆಲ್ಲ ವಿಷಾಣು ಸೋಂಕು ಪ್ರವೇಶದ ವಿರುದ್ದ ರಕ್ಷಣೆಯನ್ನು ಪಡೆಯಲು ಅನುಕೂಲವಾಗುವಂತಿದೆ. ದೀರ್ಘಾವಧಿಯಾಗಿ ರೋಗಗ್ರಸ್ತವದ ಸ್ಥಳಗಳಲ್ಲಿ ದುಗ್ಧರಸ ಶೇಖರಣೆ ಆಗಿರುವುದು ಸಹಜ. ನೀವುವಿಕೆಯಿಂದ ಇದು ಹೊರದೂಡಲ್ಪಟ್ಟು ಆ ಸ್ಥಳದಲ್ಲಿ ದುಗ್ಧರಸ ಪರಿಚಲನೆ ಕ್ರಮಗೊಳಿಸಲ್ಪಡುತ್ತದೆ. ನೀವುವಿಕೆಯಿಂದ ನೇರವಾಗಿ ಒತ್ತಿದಂತಾಗುವುದು ಮಾತ್ರವೇ ಇದರ ಕಾರಣವಲ್ಲ. ಅಲ್ಲಿ ನರಾಂತ್ಯಗಳ ಪ್ರಚೋದನೆ ಉಂಟಾಗಿ ಅದರ ಫಲವಾಗಿ ಬಿಡುಗಡೆ ಆಘುವ ಅಸಿಟೈಲ್‍ಕೋಲಿನ್, ಹಿಸ್ಟಮಿನ್ ಮುಂತಾದ ರಾಸಾಯನಿಕಗಳಿಂದ ಲೋಮನಾಳಗಳು ಕಿರಿ ಅಪಧಮನಿಗಳೂ ಹಿಗ್ಗುವುದು ಕೂಡ ಇಂಥ ಪರಿಣಾಮಕ್ಕೆ ಕಾರಣ. ಕಿಬ್ಬೊಟ್ಟೆಯನ್ನು ನೀವುವುದರ ಮೂಲಕ ಮೂತ್ರಕೋಶದಿಂದ ಮೂತ್ರವನ್ನು ಸುಸೂತ್ರವಾಗಿ ಹೊರಡಿಸಲು ಸಾಧ್ಯವಾಗುವುದೇ ಅಲ್ಲದೆ ಸಸಾರಜನಕ ಪದಾರ್ಥಗಳ ಹಾಗೂ ಪೊಟ್ಯಾಸಿಯಮ್ ಮತ್ತು ಸೋಡಿಯಮ್ ಕ್ಲೋರೈಡುಗಳ ವಿಸರ್ಜನೆಯನ್ನು ಕೂಡ ಹೆಚ್ಚಿಸಬಹುದು. ದೇಹಾದ್ಯಂತ ಸಾಮಾನ್ಯ ದೌರ್ಬಲ್ಯ, ಬಳಲಿಕೆ, ವಯಸ್ಕರಲ್ಲಿ ಸ್ನಾಯುಗಳ ಹಾಗೂ ಕೀಲುಗಳ ವಾಯನೋವು, ಕೆಲವು ಗುಂಡಿಗೆರೋಗಗಳು ಮುಂತಾದವುಗಳಲ್ಲಿ ನೀವುವಿಕೆ ಒಂದು ಪ್ರಭಾವವಾದ ಚಿಕಿತ್ಸಾ ಕ್ರಮ ಎನಿಸಿದೆ.

	ಅಂಗಮರ್ದನ ಚಿಕಿತ್ಸೆ ಪ್ರಾರಂಭದಲ್ಲಿ ಬಹಳ ಮೆತ್ತಗೆ ತಿಕ್ಕುವುದರಿಂದ ಶುರುವಾಗಬೇಕು. ನೀವುವುದನ್ನು ಸ್ವಲ್ಪ ಸ್ವಲ್ಪವಾಗಿ ಜಾಸ್ತಿಮಾಡಬೇಕು. ನೀವುವುದು ಯಾವಾಗಲೂ ದೇಹಾಂತ್ಯಗಳಿಂದ ದೇಹಮಧ್ಯದೆಡೆಗೆ ಇರಬೇಕು. ಇದಲ್ಲದೆ ಹಿಸುಕುವುದು, ಒತ್ತುವುದು ಮತ್ತು ಕೆಲವು ಸಂದರ್ಭಗಳಲ್ಲಿ ಗುದ್ದುವುದು ಇವು ಕೂಡ ಅನುಸರಿಸತಕ್ಕ ಕ್ರಮಗಳು. ಉಳುಕು ನೋವು ಹಾಗೂ ಕೀಲುಹಿಡಿತಗಳಿಗೆ ಅಂಗಮರ್ದನ ಅತ್ಯುಪಯುಕ್ತ. ಕೀಲುಗಳ ನೆರೆಯಲ್ಲಿ ಘಾತದಿಂದ ನೋವು ಉಂಟಾಗಿದ್ದಾಗ, ಪೆಟ್ಟು ಬಿದ್ದ ಎರಡು ದಿನಗಳ ತರುವಾಯ ವೈದ್ಯರ ನೇತೃತ್ವದಲ್ಲಿ ನೀವು ಚಿಕಿತ್ಸೆ ನೀಡಿದರೆ, ಕೀಲುಹಿಡಿತ ಅಂಗವಿಕೃತಗಳಾಗುವುದನ್ನು ಬಹುಮಟ್ಟಿಗೆ ಮಿತಿಗೊಳಿಸಬಹುದು.

	ನೀವುವಿಕೆಯ ಪ್ರಯೋಜನವನ್ನು ಪೂರ್ಣವಾಗಿ ಪಡೆಯಬೇಕಾದರೆ ಆರೋಗ್ಯ ಸ್ಥಿತಿಯಲ್ಲಿಯೂ ಶರೀರಾದ್ಯಂತ ನೀವಿಕೊಳ್ಳಬೇಕು. ಇಲ್ಲವೇ ನೀವಿಸಿಕೊಳ್ಳಬೇಕು. ನೀವಿಯಾದ ಮೇಲೆ ವಿಶ್ರಾಂತಿ ಅಗತ್ಯ. ದೇಹದ ನಿರ್ದಿಷ್ಟ ಭಾಗಗಳಿಗೆ ನೀವುವಿಕೆ ಸೀಮಿತವಾಗಿದ್ದಲ್ಲಿ ನೆರೆಯ ಅಂಗ ಅಂಗಾಂಶಗಳಿಗೆ ಜಖಂ ಆಗದ ರೀತಿ ಎಚ್ಚರವಾಗಿರಬೇಕು. 

ಪಾಶ್ರ್ವವಾಯುಪೀಡಿತ ರೋಗಿಗಳಲ್ಲಿ ನೀವುವಿಕೆಯಿಂದ ರಕ್ತ ಮತ್ತು ದುಗ್ಧರಸ ಪರಿಚಲನೆಗಳು ಕ್ರಮಗೊಳಿಸಲ್ಪಟ್ಟು ಶೋಭೆ ಕಡಿಮೆ ಆಗಿ, ಮಾಂಸಖಂಡಗಳಿಗೆ ಪುಷ್ಟಿ ಮತ್ತು ಲವಲವಿಕೆ ದೊರೆತು ಬಲು ಅನುಕೂಲವಾಗುತ್ತದೆ.
(ಎಂ.ಎ.ಎಚ್.; ಕೆ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ